ದೀಪಾವಳಿ
ಹಿಂದೂಗಳು ಆಚರಿಸುವ ಒಂದು ಹಬ್ಬ. ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶೀ ತಿಥಿಯ ದಿನದಿಂದ ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಭೂಮಿಯ ಮಗನಾದ ನರಕಾಸುರನನ್ನು ಶ್ರೀಕೃಷ್ಣ ಕೊಂದ ತಿಥಿಯಾದ ಚತುರ್ದಶಿಯಂದು ಚಂದ್ರೋದಯ ಕಾಲದಲ್ಲಿ ಅಭ್ಯಂಗಸ್ನಾನ ಮಾಡುವುದರಿಂದ ನರಕಭಯ ತಪ್ಪಿ ಗಂಗೆಯಲ್ಲಿ ಮಿಂದ ಫಲವೂ ಸಂಪದಭಿವೃದ್ಧಿಯೂ ಉಂಟಾಗುತ್ತದೆ. ಆಶ್ವಯುಜ ಅಮಾವಾಸ್ಯೆಯ ದಿನ ಯಮನನ್ನುದೇಶಿಸಿ, ತರ್ಪಣ ಬಿಡುವುದರಿಂದ ಮೃತ್ಯುವಿನ ಭೀತಿ ತಪ್ಪುತ್ತದೆ. ಆ ದಿವಸ ರಾತ್ರಿ ಎಲ್ಲೆಡೆಗಳನ್ನೂ ದೀಪದಿಂದ ಬೆಳಗಿಸಿ ಲಕ್ಷ್ಮೀಪೂಜೆಯನ್ನು ಮಾಡುವುದರಿಂದ ಸಂಪತ್ತು ಹೆಚ್ಚುತ್ತದೆ. ಅಂದಿನಿಂದ ಒಂದು ತಿಂಗಳ ಕಾಲ ಆಕಾಶದೀಪವನ್ನು ಹಚ್ಚುವುದರಿಂದ ಪಿತೃದೇವತೆಗಳು ತೃಪ್ತರಾಗುತ್ತಾರೆ.

ಕಾರ್ತಿಕ ಶುಕ್ಲ ಪ್ರಥಮೆಯ ದಿನ ವಿಕ್ರಮ ಶಕ ಆರಂಭವಾಯಿತು ; ಶ್ರೀಕೃಷ್ಣ ಗೋವರ್ಧನ ಪರ್ವತವನ್ನೆತ್ತಿ ಗೋಕುಲದ ಗೋಪಾಲರು ಮತ್ತು ಗೋವುಗಳನ್ನು ಮಳೆಯಿಂದ ಕಾಪಾಡಿದ ; ಮತ್ತು ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿಯನ್ನು ವಾಮನ ಪಾತಾಳಕ್ಕೆ ಮೆಟ್ಟಿ ಲೋಕಕ್ಷೇಮವನ್ನೆಸಗಿದ. ಆ ದಿವಸ ಬೆಳಗ್ಗೆ ಸ್ನಾನಾನಂತರ ಗೋವರ್ಧನ ಮತ್ತು ಗೋಪೂಜೆಗಳನ್ನೂ ರಾತ್ರಿ ಬಲೀಂದ್ರ ಪೂಜೆಯನ್ನೂ ಮಾಡಿ ಜನ ಸಂತೋಷದಿಂದಿರುತ್ತಾರೆ. ಅಂದಿನ ಜಯಾಪಜಯಗಳು ವರ್ಷದ ಲಾಭನಷ್ಟಗಳನ್ನು ಸೂಚಿಸುತ್ತವೆ. ಕೆಲವು ವ್ಯಾಪಾರಿಗಳಿಗೆ ವರ್ಷದ ಹೊಸ ಲೆಕ್ಕ ಅಂದು ಪ್ರಾರಂಭವಾಗುತ್ತದೆ. ಸಾಯಂಕಾಲದಲ್ಲಿ ಮಾರ್ಗಪಾಲಿ ಉಲ್ಲಂಘನೆ ಮತ್ತು ಹಗ್ಗದ ಜುಗ್ಗಾಟವನ್ನು ಹಿಂದೆ ರಾಜರು ನಡೆಸುತ್ತಿದ್ದರು.

ಮಕ್ಕಳಿಗೆ ಬಾಣವಿರುಸುಗಳ ಸಂಭ್ರಮ ಮತ್ತು ಹೊಸ ಅಳಿಯನಿಗೆ ಮಾವನ ಮನೆಯ ಸುಸ್ವಾಗತ ಇವು ಈ ಹಬ್ಬದ ವೈಶಿಷ್ಟ್ಯಗಳು. ಅe್ಞÁನವೆಂಬ ಕತ್ತಲನ್ನು ನೀಗಿ ಜನರು ಸುಖಸಂತೋಷಗಳಿಂದ ನಲಿಯುತ್ತ ಶಾಂತಿಯಿಂದಿರಲಿ ಎಂನ್ನುವುದೇ ದೀಪಾವಳಿಯ ಸಂದೇಶ.		     							   (ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ